ಆವ ಕುಲವೋ ।।।। ಆವ ಕುಲವೋ ರಂಗ ಅರಿಯಲಾಗದು ನೀ ಯಾವ ಕುಲವೋ ರಂಗ ಅರಿಯಲಾಗದೋ ।ಪ। ಯಾವ ಕುಲವೆಂದರಿಯಲಾಗದು ಗೋವಾ ಕಾಯ್ವ ಗೊಲ್ಲನಂತೆ ದೇವ ಲೋಕದ ಪಾರಿಜಾತ ಹೂವ ಸತಿಗೆ ತಂದನಂತೆ
ಗೋಕುಲದಲ್ಲಿ ಪುಟ್ಟಿದನಂತೆ ಗೋವ್ಗಳನ್ನು ಕಾಯ್ದನಂತೆ ಕೊಳಲನೂದಿ ಮೃಗ ಪಕ್ಷಿಗಳ ಮರುಳು ಮಾಡಿದನಂತೆ ತರಳ ತನದಿ ಒರಳ ನಿಗಹಿ ಮರವ ಮುರಿದು ಮತ್ತೆ ಹಾರಿ ತೆರೆದು ಬಾಯೊಳು ನೀರೇಳು ಲೋಕವ ಇರಿಸಿ ತಾಯ್ಗೆ ತೋರ್ದನಂತೆ ।।
ಗೊಲ್ಲತಿಯರ ಮನೆಯ ಹೊಕ್ಕು ಕಳ್ಳ ತನವ ಮಾಡಿದನಂತೆ ಬಲ್ಲದ ಪೂತನಿ ವಿಷವ ನುಂಡು ಮೆಲ್ಲನೆ ತೃಣನ ಕೊಂದನಂತೆ ಪಕ್ಷಿ ತನ್ನ ವಾಹನವಂತೆ ಹಾವು ತನ್ನ ಹಾಸಿಗೆಯಂತೆ ಮುಕ್ಕಣ್ಣ ತನ್ನ ಮೊಮ್ಮಗನಂತೆ ಮುದ್ದು ಮುಖದ ಚೆಲ್ವನಂತೆ ।।
ಕರಡಿ ಮಗಳ ತಂದನಂತೆ ಶರಧಿ ಮಗಳು ಮಡದಿಯಂತೆ ಧರಣಿಯನ್ನು ಬೇಡಿದನಂತೆ ಈರೇಳು ಲೋಕದ ಒಡೆಯನಂತೆ ಹಡಗಿನಿಂದಲಿ ಬಂದನಂತೆ ಕಡಲ ದಡೆಯಲಿ ನಿಂದನಂತೆ ಒಡನೆ ಮದ್ವರಿಗೊಲಿದನಂತೆ ಒಡೆಯ ಹಯವದನನಂತೆ ।।